ಕುಂಸಿ

ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕಿನ ಒಂದು ಪಟ್ಟಣ, ಹೋಬಳಿ ಕೇಂದ್ರ. ಶಿವಮೊಗ್ಗ ಜೋಗ ಮಾರ್ಗದಲ್ಲಿ ಶಿವಮೊಗ್ಗಕ್ಕೆ ವಾಯವ್ಯದಲ್ಲಿ 27ಕಿಮೀ ದೂರದಲ್ಲಿದೆ. ಇದು ಶಿವಮೊಗ್ಗ ಸಾಗರ ರೈಲ್ವೆ ಮಾರ್ಗದ ಒಂದು ನಿಲ್ದಾಣ. 

 ಈ ಊರಿಗೆ ಹಿಂದೆ ಕುಂಬಸೆ ಎಂಬ ಹೆಸರಿತ್ತೆಂದೂ ಹುಂಚದ ಜಿನದತ್ತರಾಯ ಇಲ್ಲಿಯ ಜೈನಬಸದಿಗೆ ಗ್ರಾಮವನ್ನು ದಾನವಾಗಿ ಕೊಟ್ಟನೆಂದೂ ಐತಿಹ್ಯವಿದೆ. ಇಲ್ಲಿನ ಪಕ್ಷಿರಂಗನಾಥ ದೇವಸ್ಥಾನದಲ್ಲಿ ಹರಡಿದ ರೆಕ್ಕೆಯುಳ್ಳ ಗರುಡನ ಮೇಲೆ ಕುಳಿತಿರುವ ವಿಷ್ಣು ವಿಗ್ರಹವಿದೆ.

 ಕುಂಸಿ ಮ್ಯಾಂಗನೀಸ್ ಗಣಿಗಳಿಗೆ ಪ್ರಸಿದ್ಧ. ಈ ಊರಿನ ಬಳಿ ಧಾರವಾಡ ಶಿಲಾಸ್ತೋಮಕ್ಕೆ ಸೇರಿದ ಸುಣ್ಣಕಲ್ಲು, ಸಿಲಿಕಯುಕ್ತ ಕಬ್ಬಿಣದ ಶಿಲೆಗಳು, ಮ್ಯಾಂಗನೀಸ್ ಅದುರು, ಜೇಡು ಶಿಲೆ ಹಾಗೂ ಗ್ರಾನೈಟ್ ಶಿಲೆಗಳು ದೊರಕುತ್ತವೆ. ಈ ಪ್ರದೇಶದಲ್ಲಿ ಮ್ಯಾಂಗನೀಸ್ ನಿಕ್ಷೇಪ, ರೂಪಾಂತರ ಶಿಲೆಗಳಾದ ಫಿಲ್ಲೈಟ್ ಹಾಗೂ ಶಿಸ್ಟ್ ಶಿಲೆಗಳಲ್ಲಿ ದೊರೆಯುವುದು. ಬಹುತೇಕ ಪ್ರದೇಶದಲ್ಲಿ ಸುಣ್ಣಕಲ್ಲಿನ ಪದರಗಳು ನಿಕ್ಷೇಪದ ಮೇಲ್ಭಾಗವನ್ನು ಮತ್ತು ಸಿಲಿಕಯುಕ್ತ ಕಬ್ಬಿಣ ಶಿಲೆಗಳು ನಿಕ್ಷೇಪದ ಕೆಳಭಾಗವನ್ನು ಆಕ್ರಮಿಸಿವೆ. ಮ್ಯಾಂಗನೀಸ್ ನಿಕ್ಷೇಪ ಸುಮಾರು ಒಂದು ಸಾವಿರ ಅಡಿ ಉದ್ದದವರೆಗೆ ಪ್ರಸರಿಸಿದ್ದು, 20'-30' ಆಳದ ವರೆಗೆ ದೊರೆಯುತ್ತದೆ. ಕೆಲವೆಡೆ ಅತಿ ವಿರಳವಾಗಿ 80' ಆಳದವರೆಗೂ ದೊರೆಯುತ್ತದೆ. ಮ್ಯಾಂಗನೀಸ್ ನಿಕ್ಷೇಪ ಬಂಡೆಗಳ ರೂಪದಲ್ಲಿವೆ. ಅವುಗಳ ವ್ಯಾಸ ಒಂದರಿಂದ ಮೂರು ಅಡಿಗಳಷ್ಟು. ಇಲ್ಲಿಯ ನಿಕ್ಷೇಪದಲ್ಲಿ ರಂಜಕ ಮತ್ತು ಸಿಲಿಕದ ಅಂಶ ಅತ್ಯಂತ ಕಡಿಮೆ. ಮ್ಯಾಂಗನೀಸ್ ಲೋಹದ ಅಂಶ ಸೇಕಡ 40 ರಿಂದ 50 ರಷ್ಟಿದೆ. ಕಬ್ಬಿಣದ ಅಂಶ ಸೇ.11ರಷ್ಟು. ಕುಂಸಿಯ ಬಳಿ ಸು.50,000 ಟನ್‍ಗಳಷ್ಟು ಮ್ಯಾಂಗನೀಸ್ ನಿಕ್ಷೇಪವಿದೆಯೆಂಬುದು ಅಂದಾಜು. ಈ ಪ್ರದೇಶದ ಅದುರನ್ನು ಭದ್ರಾವತಿಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗಳಿಗೆ ಮತ್ತು ಜಪಾನ್ ದೇಶಕ್ಕೆ ಕಳುಹಿಸಲಾಗುತ್ತಿದೆ. ಜೇಡಿಮಣ್ಣನ್ನು ಬೆಂಗಳೂರಿನಲ್ಲಿರುವ ಪಿಂಗಾಣಿ ಕಾರ್ಖಾನೆಗೆ ಸರಬರಾಜು ಮಾಡಲಾಗುತ್ತಿದೆ.  

 (ಟಿ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ